ಕಾಫಿ ಬೆಳೆಗಾರರು ಶ್ರೀಮಂತರು; ಎನ್ನುವವರೇ ಸ್ವಲ್ಪ ಈ ಸುದ್ದಿ ನೋಡಿ

ಕಾಫಿ ಬೆಳೆಗಾರರು ಶ್ರೀಮಂತರು, ವರ್ಷಕ್ಕೊಮ್ಮೆ ಕಾರು ಬದಲಿಸುತ್ತಾರೆ, ವಾರಾಂತ್ಯ ಕಳೆಯಲು ಬೆಂಗಳೂರಿಗೆ ಹೋಗುತ್ತಾರೆ, ವರ್ಷದಲ್ಲೆರಡು ವಿದೇಶ ಪ್ರವಾಸ ಮಾಡುತ್ತಾರೆ. ದಿನಾ ಪಾರ್ಟಿ ಮಾಡ್ತಾರೆ, ಸಂಜೆಯಾದರೆ ಜೀಪು ಹತ್ತಿ ಕ್ಲಬ್ಬು ಸೇರಿಕೊಳ್ತಾರೆ… ಇತ್ಯಾದಿ ಇತ್ಯಾದಿ mith ಗಳನ್ನು ಹೊರ ಜಗತ್ತು ಬಲವಾಗಿ ನಂಬಿಕೊಂಡಿದೆ.

ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸುವಾಗ ಕಾಫಿಯನ್ನು ತನ್ನ ಪಟ್ಟಿಯಿಂದ ಹೊರಗಿಡುತ್ತದೆ, ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವಾಗ ಕಾಫಿ ಬೆಳೆಗಾರರಿಗ್ಯಾಕೆ ಸಾಲ ಮನ್ನಾ ? ದುಡ್ಡಿಟ್ಕಂಡು ನಾಟ್ಕ ಆಡ್ತಾರೆ ಎನ್ನುವ ವಾದಗಳು ನಡೆಯುತ್ತವೆ.

ಹಾಗಾದರೆ ಕಾಫಿ ಬೆಳೆಗಾರರೆಲ್ಲಾ ಶ್ರೀಮಂತರಾ…? ಮೇಲಿನವೆಲ್ಲಾ ಮೋಜು ಮಸ್ತಿಗಳನ್ನು ಎಲ್ಲಾ ಬೆಳೆಗಾರರು ಮಾಡುತ್ತಾರಾ…? ಬೆಳೆಗಾರರು ದುಡ್ಡಿಟ್ಟುಕೊಂಡು ನಮ್ದೂ ಸಾಲ ಮನ್ನಾ ಮಾಡಿ ಅಂತಾ ನಾಟಕವಾಡುತ್ತಾರಾ…?

200% ಇಲ್ಲ, ಕಾಫಿ ಬೆಳೆಗಾರರು ಎಲ್ಲಾ ಮೋಜುಗಳನ್ನು ಮಾಡುತ್ತಾರೆ ಆದರೆ ಕಾಫಿ ಬೆಳೆಗಾರರೆಲ್ಲಾ ಮಾಡುವುದಿಲ್ಲ.! ಮತ್ತು ಕಾಫಿ ಬೆಳೆಗಾರರು ಬೇರೆಲ್ಲಾ ರೈತ ಸಮುದಾಯಕ್ಕಿಂತ ಹೆಚ್ಚು ಕಷ್ಟದಲ್ಲಿದ್ದಾರೆ. ಇದೇ ಸತ್ಯ.

ಮೋಜು ಮಸ್ತಿ ಮಾಡುವ , ದಿನಕ್ಕೊಂದು ಕಾರಿನಲ್ಲಿ ತಿರುಗುವ ದೊಡ್ಡ ಬೆಳೆಗಾರರು ಹೆಚ್ಚೆಂದರೆ 10% ಪರ್ಸೆಂಟ್ ಇರಬಹುದು, ಮಧ್ಯಮ ಗಾತ್ರದ ಬೆಳೆಗಾರರು 20% ಇರಬಹುದು ಉಳಿದ 70% ಬೆಳೆಗಾರರು ಐದು ಎಕರೆಯೊಳಗೆ ತೋಟ ಹೊಂದಿರುವ ಸಣ್ಣ ಬೆಳೆಗಾರರು. ಬಹುತೇಕ ಇಂತಹ ಬೆಳೆಗಾರರದು ಅತಂತ್ರ ಸ್ಥಿತಿ. ಹೊರಜಗತ್ತಿಗೆ ಕಾಫಿ ಚಿನ್ನದ ಬೆಳೆಯಂತೆ ತೋರುತ್ತದೆ, ಆದರೆ ಅಸಲಿ ಸಂಗತಿಯೆಂದರೆ ಅಡಿಕೆ ಬೆಳೆಗಾರರಿಗೆ ಹೋಲಿಸಿದರೆ ಕಾಫಿಯದು ಎಕರೆಗೆ ಅದರ ಅರ್ಧದ ಆದಾಯ ಮಾತ್ರ. ವರ್ಷದ ಬೆಳೆಯಾಗಿರುವ ಕಾಫಿ ಗೆ ಹೋಲಿಸಿದರೆ ವರ್ಷಕ್ಕೆ ಮೂರು ಬೆಳೆ ತೆಗೆಯುವ ತರಕಾರಿ ಕೃಷಿಕರದು ಉತ್ತಮ ಆದಾಯ.
ತರಕಾರಿಗೆ ಬೆಲೆ ಸಿಗದೇ ರಸ್ತೆಗೆ ಎಸಿತೀವಿ ಕಾಫಿ ಬೆಳೆ ಹಂಗಾ…? ಎನ್ನಬಹುದು. ತರಕಾರಿ ಮೂರು ಬೆಳೆಯಲ್ಲಿ ಕನಿಷ್ಟ ಒಂದು ಬೆಳೆ ಕೈ ಹಿಡಿಯುತ್ತದೆ, ಆದರೆ ಕಾಫಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡೂ ಹೊಡೆತ ಕೊಟ್ಟು ಬೆಳೆಗಾರನನ್ನು ಅಡ್ಡಡ್ಡ ಮಲಗಿಸುತ್ತದೆ.! ಬೆಳೆ ಚೆನ್ನಾಗಿ ಬಂದರೂ ರೋಬಸ್ಟಾ ಕಾಫಿಗೆ ಬೆಲೆ ಮೂರು ಸಾವಿರದ ಗಡಿ ದಾಟಿ ಹಲವು ವರ್ಷಗಳೇ ಕಳೆದುಹೋದವು. ಅರೇಬಿಕಾ ಕಾಫಿ ಕಾಂಡ ಕೊರಕ ಕಾಯಿಲೆಗೆ ಸಿಕ್ಕಿ ತೋಟಗಳೆಲ್ಲಾ ಬಟಾ ಬಯಲಾಗಿ ಹೋಗಿವೆ. ಇನ್ನು ಕಾರ್ಮಿಕರ ಕೊರತೆ ಮತ್ತು ಕೂಲಿಯ ಮಟ್ಟ ಬೆಳೆಗಾರನನ್ನು ಹಗಲು ರಾತ್ರಿ ಕಾಡುತ್ತವೆ, ವಾರದ ದಿನ ಹತ್ತಿರ ಬಂದರೆ ಸಾಕು ಬಟವಾಡೆ ಮಾಡಲು ಬೆಳೆಗಾರ ಖಾಸಗಿ ಬಡ್ಡಿ ವ್ಯಾಪಾರಿಯ ಕಾಲು ಹಿಡಿಯುತ್ತಾನೆ.
ಇಷ್ಟೆಲ್ಲಾ ಸರ್ಕಸ್ ಮಾಡಿ ಕಾಫಿ ಮೂಟೆ ಹೊತ್ತುಕೊಂಡು ಕ್ಯೂರಿಂಗಿಗೆ ಹೋದರೆ OT (out tun) ಯ ಭೂತ ಹೆಗಲು ಹತ್ತಿ ಕೂರುತ್ತದೆ.
ಇಷ್ಟೆಲ್ಲಾ ಕಷ್ಟಗಳನ್ನು ಹೊತ್ತಿದ್ದರೂ ಬೆಳೆಗಾರರು ತಾವು ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಅಂತಾ ಸರ್ಕಾರದೆದುರು ಬಿದ್ದು ಹೊರಳಾಡುವುದಿಲ್ಲ, ಆತ್ಮಹತ್ಯೆಯ ಮೊರೆ ಹೋಗುವುದಿಲ್ಲ, ಕಾರಣ ಎಷ್ಟೇ ಕಷ್ಟಗಳು ಎದುರಾದರೂ ಭಂಡ ಧೈರ್ಯದಿಂದ ಎದುರಿಸುವ ಗಟ್ಟಿತನ ಮಲೆನಾಡಿಗರ ರಕ್ತದಲ್ಲೇ ಇದೆ.

ಈಗ ಹೇಳಿ ಕಾಫಿ ಬೆಳೆಗಾರರು ಶ್ರೀಮಂತರಾ? ಬೆಳೆಗಾರರಿಗೆ ಸರ್ಕಾರದ ನೆರವು ಬೇಡವಾ…? ಬೆಳೆಗಾರರು ದುಡ್ಡಿಟ್ಟುಕೊಂಡು ನಾಟಕವಾಡುತ್ತಿದ್ದಾರಾ…!?

ಹೌದು… ಕಾಫಿ ಬೆಳೆಗಾರರು ಮೋಜು ಮಸ್ತಿಗಳಲ್ಲಿ ಇತರರಿಗಿಂತಾ ಒಂದು ಕೈ ಮೇಲೆಯೇ, ಅದು ಕಾಫಿ ಸಂಸ್ಕೃತಿಯ ಭಾಗ, ಬ್ರಿಟಿಷ್ ತೋಟಗಾರರಿಂದ ಕಲಿತಿದ್ದು, ಬರುವ ಸೀಮಿತ ಆದಾಯದಲ್ಲಿಯೇ ಕಾರು ಕೊಳ್ಳುತ್ತಾರೆ, ಮೋಜು ಮಾಡುತ್ತಾರೆ, ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಿ ಉತ್ತಮ ಬದುಕಿಗೆ ಅಡಿಪಾಯ ಹಾಕಿಕೊಡುತ್ತಾರೆ, ಇವೆಲ್ಲಾ ಮಾಡುವುದು ಅವರು ದುಡಿದ ಹಣದಲ್ಲಿಯೇ ಹೊರತು ಸರ್ಕಾರದ ದುಡ್ಡಿನಲ್ಲಲ್ಲ. ಬೆಳೆ ಸಾಲ ಮಾಡಿ ಮೋಜು ಮಾಡುವವರು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದಾರೆ, ಕೃಷಿ ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ರೈತರು ದೇಶದ ಎಲ್ಲಾ ಭಾಗಗಳಲ್ಲಿದ್ದಾರೆ, ಗೂಬೆ ಮಾತ್ರ ಕಾಫಿ ಬೆಳೆಗಾರರ ಮೇಲೆ.!

ಕಾಫಿ ಬೆಳೆಗಾರರ ಮೇಲಿರುವ ಪೂರ್ವಾಗ್ರಹ ಪೀಡಿತ ಯೋಚನೆಗಳಿಂದ ಹೊರಜಗತ್ತು ಹೊರ ಬರಬೇಕಿದೆ.
ನೀವೂ ರೈತರೇ ನಾವೂ ರೈತರೇ, ನಮಗೂ ನೋವುಗಳಿವೆ, ಜೀವ ಹೋಗುವಷ್ಟು ಕಷ್ಟಗಳಿವೆ. ನಮ್ಮೊಳಗೆ ತಾರತಮ್ಯಗಳು ಬೇಡ.

“ಒಟ್ಟಾಗಿ ಬೆಳಿಯೋಣ, ಒಟ್ಟಾಗಿ ಬೆಳೆಯೋಣ…”

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *