ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ,ಐದು ಜನರ ಬಂಧನ

ಬೇಲೂರು: ತಾಲೂಕಿನ ಹಳೇಬೀಡಿನಲ್ಲಿ ವ್ಯಕ್ತಿಯೊಬ್ಬ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಅದನ್ನು ಚಿತ್ರೀಕರಿಸಿ ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿರುವ ವಿಡಿಯೊವೊಂದು ವೈರಲ್‌ ಆಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಹಾಸನ ಮೂಲದ ಗುಲಾಭ್‌ ಎಂಬಾತ ಹಳೇಬೀಡಿನಲ್ಲಿ ವೆಲ್ಡಿಂಗ್‌ ಅಂಗಡಿಯನ್ನು ಇಟ್ಟುಕೊಂಡಿದ್ದು ಈತನೇ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈತ ತನ್ನ ಸ್ನೇಹಿತ ಸೈಫ್‌ ಹಾಗೂ ಇತರೇ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ವಿಡಿಯೊ ಶೇರ್‌ ಮಾಡಿದ್ದು, ಇದು ಸಂಘಟನೆಗಳನ್ನು ಕೆರಳಿಸಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂಘಟನೆಗಳ ಸದಸ್ಯರು ಅಂಗಡಿ ಮುಂದೆ ಸೇರಿ ಶುಕ್ರವಾರ ರಾತ್ರಿ ಎಚ್ಚರಿಕೆ ನೀಡಿದ್ದರು. ಶನಿವಾರವೂ ಜಾಲತಾಣಗಳಲ್ಲಿ ವೈರಲ್‌ ಆಗಿರುವುದನ್ನು ಗಮನಿಸಿ ಕಾರ‍್ಯಕರ್ತರು ಅಂಗಡಿಗೆ ಮುತ್ತಿಗೆ ಹಾಕಿದ್ದು, ಈ ಪೈಕಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಶನಿವಾರ ಬೇಲೂರು ಪಟ್ಟಣದ ನೆಹರೂ ನಗರದಲ್ಲಿ ಒಂದು ಕೋಮಿನವರು ಹಾಕಿದ್ದ ಪ್ರಚಾರ ಫಲಕಗಳನ್ನು ಮತ್ತೊಂದು ಕೋಮಿನವರು ಹರಿದು ಹಾಕಿದ ಪ್ರಸಂಗವೂ ನಡೆದು ಬಿಗುವಿನ ವಾತಾವರಣ ಸೃಷ್ಟಿಗೊಂಡಿದೆ. ವಿಷಯ ತಿಳಿದು ಆರಕ್ಷ ಕ ವೃತ್ತ ನಿರೀಕ್ಷ ಕ ಲೋಕೇಶ್‌ ಅವರು ಮುನ್ನಚ್ಚರಿಕೆ ಕ್ರಮವಾಗಿ ಬಂದೋಬಸ್ತ್‌ ಕ್ರಮ ಕೈಗೊಂಡರು.
”ಈ ಎರಡೂ ಪ್ರಕರಣಗಳ ಸಂಬಂಧ ಹಳೇಬೀಡು ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಒಟ್ಟು ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಲೋಕೇಶ್‌ ತಿಳಿಸಿದ್ದಾರೆ.

”ಸೃಫ್‌, ರಘು, ಚೇತನ್‌ ಹಾಗೂ ಇನ್ನೂ ಐವರನ್ನು ಬಂಧಿಸಲಾಗಿದೆ. ಸಂದೇಶ ಕಳಿಸಿದ ಪ್ರಮುಖ ವ್ಯಕ್ತಿ ಗುಲಾಭ್‌ ತಲೆ ಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಬಲೆ ಬೀಸಲಾಗಿದೆ,” ಎಂದು ಲೋಕೇಶ್‌ ತಿಳಿಸಿದ್ದಾರೆ. ಜನರು ಯಾವುದೇ ವದಂತಿಗಳಿಗೂ ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಅರೇಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿ, ನಾಗೇನಹಳ್ಳಿಗಳಲ್ಲಿಯೂ ಪೊಲೀಸ್‌ ಮೀಸಲು ಪಡೆಗಳ ತಂಡಗಳನ್ನು ಕರೆಸಿಡಲಾಗಿದೆ.

Leave a Reply

Your email address will not be published. Required fields are marked *