ಕೆಎಸ್‌ಒಯುಗೆ ಕೊನೆಗೂ ಸಿಕ್ಕಿತು ಯುಜಿಸಿಯಿಂದ ಮಾನ್ಯತೆ

🌹 ಕಾವೇರಿ ನ್ಯೂಸ್ 🌹: ಬೆಂಗಳೂರು/ನವದೆಹಲಿ(ಆ.10): ನಾಲ್ಕು ವರ್ಷಗಳಿಂದ ಮಾನ್ಯತೆ ಕಳೆದುಕೊಂಡು ಅತಂತ್ರವಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಒಯು) ಕೊನೆಗೂ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ. 2018-19ರಿಂದ 2022-23ರ ಅವಧಿಗೆ ಒಟ್ಟು ಹದಿನೇಳು ಕೋರ್ಸ್‌ಗಳಿಗೆ ಮಾನ್ಯತೆ ನೀಡಿ ಯುಜಿಸಿ ಗುರುವಾರ ಆದೇಶ ಹೊರಡಿಸಿದೆ.
ತಾಂತ್ರಿಕ ವಿಷಯಗಳನ್ನು ಆರಂಭಿಸಿದ್ದು ಮತ್ತು ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದಕ್ಕಾಗಿ ಯುಜಿಸಿಯು 2015ರಲ್ಲಿ ಮುಕ್ತ ವಿವಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಪಡಿಸಿತ್ತು. ಆದರೆ ಬಳಿಕ ತಾವು ತಾಂತ್ರಿಕ ವಿಷಯಕ್ಕೆ ಅವಕಾಶ ನೀಡುವುದಿಲ್ಲ ಮತ್ತು ರಾಜ್ಯದೊಳಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಾತಿ ನೀಡುತ್ತೇವೆ ಎಂದು ಕೆಎಸ್‌ಒಯು ಯುಜಿಸಿಗೆ ತಿಳಿಸಿತ್ತು. ಜತೆಗೆ, ಯುಜಿಸಿಯ ನಿಯಮಾವಳಿಗಳನ್ನು ಪಾಲಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆ ಪರಿಶೀಲನೆ, ಸಭೆಗಳನ್ನು ನಡೆಸಿದ ಯುಜಿಸಿ ಕೊನೆಗೂ ಕೆಎಸ್‌ಒಯುಗೆ ಅನುಮತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಯುಜಿಸಿಗೂ ಮುನ್ನ ಇತ್ತೀಚೆಗಷ್ಟೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಕೆಎಸ್‌ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಯಾವ್ಯಾವ ಕೋರ್ಸ್‌ಗಳು?: ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟಾರೆ 17 ಕೋರ್ಸ್‌ಗಳಿಗೆ ಮಾನ್ಯತೆ ಕಲ್ಪಿಸಲಾಗಿದೆ. ಪದವಿ ಕಲಾ, ವಾಣಿಜ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸ್ನಾತಕೋತ್ತರ ಪದವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್‌, ಹಿಂದಿ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಂವಹನ, ಕನ್ನಡ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಉರ್ದು, ಸಮಾಜಶಾಸ್ತ್ರ, ಲೈಬ್ರರಿ ಆ್ಯಂಡ್‌ ಇನ್‌ಫಾರ್ಮೇಷನ್‌, ಪರಿಸರ ವಿಜ್ಞಾನ ಸೇರಿ 17 ಕೋರ್ಸ್‌ಗಳಿಗೆ ಈಗ ಮಾನ್ಯತೆ ಸಿಕ್ಕಿದೆ. ಒಟ್ಟು ಕೆಎಸ್‌ಒಯು 32 ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ಯುಜಿಸಿ ಮುಂದೆ ಮನವಿ ಸಲ್ಲಿಸಿತ್ತು. ಸದ್ಯ 17 ಕೋರ್ಸ್‌ಗಳಿಗೆ ಮಾತ್ರ ಸಿಕ್ಕಿದೆ. ಬಾಕಿ ಉಳಿದ ಕೋರ್ಸ್‌ಗಳಿಗೂ ಆದಷ್ಟುಶೀಘ್ರ ಅನುಮತಿ ಪಡೆಯಲು ಪ್ರಯತ್ನಿಸುವುದಾಗಿ ಕೆಎಸ್‌ಒಯು ಕುಲಪತಿ ಪ್ರೊ. ಶಿವಲಿಂಗಯ್ಯ ಮಾಹಿತಿ ನೀಡಿದ್ದಾರೆ.

ವರದಿ – ಹೋಮೇಶ್,ಮಣಗಲಿ

Leave a Reply

Your email address will not be published. Required fields are marked *