ಕೊಡಗಿನಲ್ಲಿ ಪ್ರವಾಹ ಸ್ಥಿತಿ,ಹೈ ಅಲರ್ಟ್ ಘೋಷಣೆ: ಹೆಲಿಕಾಪ್ಟರ್ ಮೂಲಕ ಜನರ ಸ್ಥಳಾಂತರಕ್ಕೆ ಸಿಎಂ ಆದೇಶ

🌹 ಕಾವೇರಿ ನ್ಯೂಸ್ 🌹: ಮಡಿಕೇರಿ: ಮಂಜಿನಗರಿಯಲ್ಲಿ ಮಳೆಯ ರೌದ್ರನರ್ತನಕ್ಕೆ ಜನ ತತ್ತರಿಸಿದ್ದಾರೆ. ಬದಿಗೆರೆಯಲ್ಲಿ ಪ್ರಾಣ ರಕ್ಷಣೆಗಾಗಿ ಗುಡ್ಡ ಹತ್ತಿ ಸಂಕಷ್ಟಕ್ಕೆ ಸಿಲುಕಿರುವ 300ಕ್ಕೂ ಹೆಚ್ಚು ಮಂದಿಯನ್ನು ಕೂಡಲೇ ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಬದಿಗೆರೆ ಸಮೀಪದ ಹತ್ತಿಹೊಳೆ ತುಂಬಿದ್ದರಿಂದ ಆತಂಕಗೊಂಡಿರುವ ನೂರಾರು ಮಂದಿ ಊರಿನ ಗುಡ್ಡವನ್ನು ಏರಿ ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಆ ಗುಡ್ಡವೂ ಕುಸಿಯುವ ಲಕ್ಷಣ ಕಂಡು ಬಂದಿದೆ. ಈ ಬಗ್ಗೆ ವರದಿ ತರಿಸಿಕೊಂಡಿರುವ ಮುಖ್ಯಮಂತ್ರಿಗಳು ಈ ಕೂಡಲೇ ಅಲ್ಲಿಗೆ ಧಾವಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೊಡಗು ಹಾಗೂ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೆರೆ, ನದಿಗಳು ತುಂಬಿ ಆತಂಕದ ಹಂತ ತಲುಪಿದೆ. ಈ ಎಲ್ಲೆಡೆ ಜನ ಹಾಗೂ ಜಾನುವಾರು ರಕ್ಷಣೆಗೆ ಮೊದಲ ಆದ್ಯತೆ ನೀಡಲು ಮುಖ್ಯಮಂತ್ರಿಗಳು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ.

ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಮೂರೂ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ಕೂಡಲೇ ಜಿಲ್ಲೆಯಾದ್ಯಂತ ಸಂಚರಿಸಿ ನೊಂದವರಿಗೆ ಭರವಸೆ ತುಂಬುವಂತೆ ಹಾಗೂ ಅಗತ್ಯ ಎಲ್ಲಾ ನೆರವಿನ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *