ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ

ಮಡಿಕೇರಿ :-ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಶನಿವಾರ ನಡೆಯಿತು.
ಜಿಲ್ಲಾ ಅಂಚೆ ಕಚೇರಿಯ ಸೂಪರಿಡೆಂಟ್ ಎಸ್.ಆರ್.ನಾಗೇಂದ್ರ ಅವರು ಮಾತನಾಡಿ ಪ್ರತಿ ಗ್ರಾಮೀಣ ಅಂಚೆ ಕಚೇರಿಗಳಲ್ಲೂ ಸಹ ಬ್ಯಾಂಕಿಂಗ್ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯು ಸೆಪ್ಟೆಂಬರ್ 1 ರಿಂದ ರಾಷ್ಟ್ರಾದ್ಯಂತ ಆರಂಭಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಆರ್ಥಿಕ ಸ್ವಾಯತ್ತತೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಸರಳ ವ್ಯವಹಾರ ಪಡೆಯಲು ಈ ಬ್ಯಾಂಕ್ ಸೇವೆ ಅನುಕೂಲವಾಗಲಿದೆ. ಜೊತೆಗೆ ನಗದು ರಹಿತ ವಹಿವಾಟು ಮಾಡಲು ಈ ಬ್ಯಾಂಕಿಂಗ್ ಸೇವೆ ಸಹಕಾರಿಯಾಗಿದೆ ಎಂದರು.
ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್, ಉಳಿತಾಯ ಖಾತೆ, ಚಾಲ್ತಿ ಖಾತೆ, ನೇರ ನಗದು ವ್ಯವಹಾರ, ವಿಮಾ ಸೌಲಭ್ಯ ಹೊಂದಲು ಅಂಚೆ ಪಾವತಿ ಬ್ಯಾಂಕಿಂಗ್ ಸೇವೆ ಪ್ರಯೋಜನಕಾರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರದಲ್ಲಿ 1.50 ಲಕ್ಷ ಭಾರತೀಯ ಅಂಚೆ ಶಾಖೆಯನ್ನು ಹೊಂದಿದ್ದು, ಸದ್ಯ 650 ಶಾಖೆಗಳು ಆರಂಭಗೊಳ್ಳುತ್ತಿವೆ. ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ನೀಡಿ ಅಂಚೆ ಪಾವತಿ ಬ್ಯಾಂಕಿಂಗ್ ಖಾತೆ ತೆರೆಯಬಹುದಾಗಿದೆ ಎಂದು ನಾಗೇಂದ್ರ ಅವರು ವಿವರಿಸಿದರು.
ಡಿಸೆಂಬರ್ ಅಂತ್ಯದೊಳಗೆ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಏಕ ಕಾಲದಲ್ಲಿ ದೇಶಾದ್ಯಂತ ಆರಂಭಿಸಲಾಗುತ್ತಿದೆ ಎಂದು ಅವರು ನುಡಿದರು.
ಭಾರತೀಯ ಸ್ಟೇಟ್ ಬ್ಯಾಂಕಿನ ಹಿರಿಯ ಅಧಿಕಾರಿ ದಿನೇಶ್ ಪೈ ಅವರು ಮಾತನಾಡಿ ಮನೆ ಮನೆಗೆ ಬ್ಯಾಂಕಿಂಗ್ ಸೇವೆ ಕಲ್ಪಿಸುವಂತಾಗಲು ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಸೇವೆ ಅನುಕೂಲವಾಗಿದೆ ಎಂದರು.
ಡಿವೈಎಸ್‍ಪಿ ಸುಂದರ್‍ರಾಜ್ ಅವರು ಮಾತನಾಡಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆಗಳು ಲಭ್ಯವಾಗುತ್ತಿದೆ. ಆ ನಿಟ್ಟಿನಲ್ಲಿ ಅಂಚೆ ಪಾವತಿ ಬ್ಯಾಂಕಿಂಗ್ ಸೇವೆಯು ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಿದೆ ಎಂದರು.
ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ವ್ಯವಸ್ಥಾಪಕರಾದ ನಿದಿನ್.ಕೆ. ಪ್ರಸಾದ್, ಬಿಎಸ್‍ಎನ್‍ಎಲ್ ಲಿಂಗಪ್ಪಗೌಡ ಇತರರು ಇದ್ದರು. ಸುಂಟಿಕೊಪ್ಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶ್ರೀನಿವಾಸ್ ಸ್ವಾಗತಿಸಿದರು. ಅನಿತಾ ಕುಮಾರಿ ಪ್ರಾರ್ಥಿಸಿದರು, ಕಲಾವತಿ ನಿರೂಪಿಸಿರು. ಪೋಸ್ಟ್ ಮಾಸ್ಟರ್ ಸೀತಮ್ಮ ವಂದಿಸಿದರು.

Leave a Reply

Your email address will not be published. Required fields are marked *