ರಾಜೀವ್‍ಗಾಂಧಿ ವಸತಿ ಯೋಜನೆಯಡಿ 69 ಸಾವಿರ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸೆ.25ರವರೆಗೆ ಅವಕಾಶ

ಬೆಂಗಳೂರು: ವಿವಿಧ ತಾಂತ್ರಿಕ ಕಾರಣಗಳಿಗಾಗಿ ಸೌಲಭ್ಯ ವಂಚಿತ 69,000 ಫಲಾನುಭವಿಗಳಿಗೆ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದರು.

ರಾಜೀವ್‍ಗಾಂಧಿ ವಸತಿ ನಿಗಮದ ಸ್ಪಂದನಾ ಸಹಾಯವಾಣಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಂಜೂರಾಗಿದ್ದ ಮನೆಗಳ ಪೈಕಿ ಕೆಲವಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿತ್ತು. ಕೆಲವರು ಮನೆ ನಿರ್ಮಾಣಕ್ಕೆ ತಳಪಾಯ ಹಾಕಿದ ನಂತರ ವಿವಿಧ ತಾಂತ್ರಿಕ ಕಾರಣಗಳಿಂದ ಮಂಜೂರಾಗಿದ್ದ ಮನೆಗಳು ರದ್ದುಗೊಂಡಿವೆ. ಈ ಸೌಲಭ್ಯ ವಂಚಿತರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5ರಿಂದ 25ರವರೆಗೆ ಕಾಲಾವಕಾಶ ನೀಡಲಾಗುವುದು.

ಯೋಜನೆಗೆ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳ ಆದಾಯ ಮಿತಿಯನ್ನು 32 ಸಾವಿರ ರೂ.ಗೆ ನಿಗದಿ ಪಡಿಸಲಾಗಿತ್ತು, ಇತ್ತೀಚೆಗೆ ಈ ಮೀತಿಯನ್ನು 1.20ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಇತರ ವಸತಿ ಯೋಜನೆ ಫಲಾನುಭವಿ ಗಳ ಆದಾಯ ಮಿತಿಯನ್ನು ಬಿಪಿಎಲ್ ಆದಾಯ ಮಿತಿಗೆ ಅನುಗುಣವಾಗಿ 1.20 ಲಕ್ಷ ರೂ.ಗೆ ಹೆಚ್ಚಿಸುವಂತೆ ಹಣಕಾಸು ಇಲಾಖೆ ಮತ್ತು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ವಸತಿ ಯೋಜನೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ, ಇಲಾಖೆ ಯಲ್ಲಿ ಕಚ್ಛಾ, ಪಕ್ಕಾ ಯೋಜನೆಯಿದೆ, ಮನೆ ದುರಸ್ತಿಗೆ 15 ಸಾವಿರ ರೂ. ಅನುದಾನ ನೀಡಲಾಗುತ್ತಿದೆ. ಈ ಫಲಾನುಭವಿಗಳಿಗೆ ಹೊಸ ಮನೆ ಮಂಜೂರು ಸಂದರ್ಭದಲ್ಲಿ ಹಿಂದೆ ಸೌಲಭ್ಯ ಪಡೆದ ಕಾರಣಕ್ಕೆ ಹೆಸರುಗಳು ಬ್ಲಾಕ್ ಆಗಿವೆ. ನಿಗಮದ ಮುಂದಿನ ಸಭೆಯಲ್ಲಿ ಹೊಸ ನಿರ್ಣಯ ತೆಗೆದುಕೊಂಡು ಕಚ್ಛಾ, ಪಕ್ಕಾ ಯೋಜನೆಯ ಫಲಾನುಭವಿ ಗಳಿಗೂ ಹೊಸ ಮನೆ ಮಂಜೂರಾತಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೊಸ ಮನೆಯ ಅಗತ್ಯವಿದ್ದು, 2011ಕ್ಕಿಂತ ಹಿಂದೆ ಆಶ್ರಯ ಯೋಜನೆಯಡಿ ಮನೆ ಪಡೆದವರಿಗೆ ಮತ್ತೆ ಮನೆ ವಸತಿ ಮಂಜೂರಾತಿಗೆ ಚಿಂತನೆ ನಡೆದಿದೆ. ರಾಜೀವ್‍ಗಾಂಧಿ ವಸತಿ ನಿಗಮ ವತಿಯಿಂದ ಈವರೆಗೆ 40 ಲಕ್ಷ ಮನೆ ನಿರ್ಮಿಸಲಾಗಿದೆ, ಯೋಜನೆ ಫಲಾನುಭವಿಗಳ ಕೋಡ್ ಸಂಖ್ಯೆ ನಮೂದಿಸಿದರೆ ಮನೆಯ ಸ್ಥಿತಿ-ಗತಿ, ಫಲಾನುಭವಿಗಳ ಪೂರ್ಣ ವಿವರ ತಿಳಿಯುತ್ತದೆ ಎಂದರು.

Leave a Reply

Your email address will not be published. Required fields are marked *