ಕೊಡಗು & ಸಕಲೇಶಪುರಕ್ಕೆ 10 ಕೋಟಿ ಜೊತೆ ಅಗತ್ಯ ನೆರವು ನೀಡಿದ ಧರ್ಮಾಧಿಕಾರಿಗಳು

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಉಂಟಾಗಿರುವ ವ್ಯಾಪಕ ಹಾನಿಯ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಇಂದು ಧರ್ಮಸ್ಥಳದಲ್ಲಿ ವಿಶ್ಲೇಷಣೆ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಕುಟುಂಬಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ನಡೆಸಿದ ಸರ್ವೇಕ್ಷಣೆ ವರದಿಯನ್ನು ಕೊಡಗು ಜಿಲ್ಲೆಯ ನಿರ್ದೇಶಕ ಶ್ರೀ ಯೋಗೀಶ್‌ರವರು ನೀಡಿದರು.

ಜಿಲ್ಲೆಯಲ್ಲಿ ಸುಮಾರು 1,715 ಯೋಜನೆಯ ಕುಟುಂಬಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಈ ಪೈಕಿ 1,000 ಕುಟುಂಬಗಳ ಮನೆಗಳು ಸಂಪೂರ್ಣವಾಗಿ ನಾಶವಾಗಿದೆ ಇಲ್ಲವೇ ಹಾನಿಯುಂಟಾಗಿದೆ. ಸುಮಾರು ರೂ. 2.50 ಕೋಟಿಯ ಉಪಕರಣಗಳು, ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಿದೆ. ಸುಮಾರು ರೂ. 1.00 ಕೋಟಿಗೂ ಮಿಕ್ಕಿದ ವ್ಯವಹಾರದ ವಸ್ತುಗಳು ನಾಶವಾಗಿದೆ. 1,500 ಎಕರೆ ಕೃಷಿ ಸಂಪೂರ್ಣವಾಗಿ ನಾಶವಾಗಿದೆ.

ಇಂತಹ ಕುಟುಂಬಳಿಗೆ ಪುನಶ್ಚೇತನಗೊಳ್ಳಲು ನೀಡಬೇಕಾದ ಸಹಕಾರದ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು.

ಈ ಕುರಿತಂತೆ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದಿಂದ ಕೊಡಗು ಜಿಲ್ಲೆಯಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಯಾ ಹಾನಿಯಾದವರಿಗೆ ತಲಾ ರೂ. 25,000 ದಂತೆ ಗೃಹನಿರ್ಮಾಣಕ್ಕೆ ಕ್ಷೇತ್ರ ಧರ್ಮಸ್ಥಳದಿಂದ ನೆರವನ್ನು ಘೋಷಿಸಿದರು. ಇದೀಗ 1.044 ಮನೆಗಳಿಗೆ ರೂ. 2.61 ಕೋಟಿ ಮಂಜೂರು ಮಾಡಲಾಯಿತು.

ಅದೇ ರೀತಿ ಮನೆಯಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು 1,335 ಮನೆಗಳಿಗೆ ರೂ. 15,000 ದಂತೆ ರೂ. 2.00 ಕೋಟಿಯನ್ನು ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಮಾಡಲಾಯಿತು.

ಜಿಲ್ಲೆಯಲ್ಲಿ ಹಾನಿಗೊಳಪಟ್ಟ 1,117 ಕುಟುಂಬಗಳ 1450 ಎಕ್ರೆ ಕೃಷಿ ಭೂಮಿ ನಾಶವಾಗಿದ್ದು, ಈ ಕುಟುಂಬಗಳಿಗೆ ಕೃಷಿಯನ್ನು ಪುನರ್‌ನಿರ್ಮಾಣ ಮಾಡುವರೇ ತಲಾ ರೂ. 25,000 ನಂತೆ ರೂ. 2.80 ಕೋಟಿಯನ್ನು ನಿರ್ಧರಿಸಲಾಯಿತು.

ಅಲ್ಲದೆ ಸಕಲೇಶಪುರ ಮತ್ತು ಅರಕಲಗೂಡು ಮತ್ತಿತರ ಪ್ರದೇಶಗಳಲ್ಲಿ ಹಾನಿಗೊಂಡಿರುವ ಕುಟುಂಬಗಳಿಗೆ ತಲಾ ರೂ.10,000 ದಂತೆ ರೂ. 60 ಲಕ್ಷ ಮಂಜೂರು ಮಾಡಲಾಯಿತು. ಹೀಗೆ ಒಟ್ಟಾರೆಯಾಗಿ ರೂ. 8.00 ಕೋಟಿ ಮೊತ್ತವನ್ನು ನೇರವಾಗಿ ಪೀಡಿತರಿಗೆ ತಲುಪಿಸುವರೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಪೂಜ್ಯರು ಸೂಚಿಸಿದರು. ಪರಿಹಾರಧನವನ್ನು ಆಯಾ ಸೊತ್ತುಗಳ ನಿರ್ಮಾಣ/ ಖರೀದಿಯ ಸಮಯದಲ್ಲಿ ವಿತರಿಸುವರೇ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ವೀರೇಂದ್ರ ಹೆಗ್ಗಡೆಯವರು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮುಖ್ಯಮಂತ್ರಿ ಪರಿಹಾರನಿಧಿಗೆ ವಂತಿಗೆ ಸಮರ್ಪಣೆ :
ಇದೇ ಸಂದರ್ಭ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 6750 ಖಾಯಂ ಸಿಬ್ಬಂದಿಗಳು ತಮ್ಮ ಮೂರು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರನಿಧಿಗೆ ದೇಣಿಗೆಯಾಗಿ ನೀಡಿದ್ದು, ಇದಕ್ಕೆ ಪೂರಕವಾಗಿ ಅಷ್ಟೇ ಮೊತ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇಣಿಗೆಯನ್ನು ಸೇರಿಸಿ ಒಟ್ಟಾರೆ ರೂ. 2,00 ಕೋಟಿಯನ್ನು ಮುಖ್ಯಮಂತ್ರಿ ಕೊಡಗು ಪರಿಹಾರನಿಧಿಗೆ ಸಮರ್ಪಿಸುವರೇ ತೀರ್ಮಾನ ಕೈಗೊಳ್ಳಲಾಯಿತು. ಈ ಸಂಬಂಧ ಯೋಜನೆಯ ಕಾರ್ಯಕರ್ತರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೊಡಗು ಜಿಲ್ಲೆಯ ವ್ಯಾಪಕ ಹಾನಿಯ ಬಗ್ಗೆ ಪ್ರತ್ಯಕ್ಷ ವರದಿಯನ್ನು ನೀಡಿ ರೂ. 2.00 ಕೋಟಿ ಮೊತ್ತದ ಚೆಕ್ಕನ್ನು ನೀಡಿ ಬರುವರೇ ತೀರ್ಮಾನಿಸಲಾಯಿತು.

ಸ್ವಸಹಾಯ ಸಂಘ ಕಂತುಗಳ ಪಾವತಿಯಲ್ಲಿ ವಿರಾಮ :
ಈಗ ಬಂದಿರುವ ವರದಿಯಂತೆ ಸ್ವಸಹಾಯ ಸಂಘಗಳ ಸುಮಾರು 1,000 ಸದಸ್ಯರುಗಳಿಗೆ ತಾವು ಪಡಕೊಂಡಿರುವ ಸ್ವಸಹಾಯ ಸಂಘಗಳ ಸಾಲಗಳನ್ನು ಮರುಪಾವತಿಸಲು ಸಾಧ್ಯವಿಲ್ಲದೇ ಇರುವುದರಿಂದ ಇದರ ಮರುಪಾವತಿ ಕಂತುಗಳನ್ನು 12 ವಾರಗಳವರೆಗೆ ಮುಂದೂಡುವರೇ ಅಧ್ಯಕ್ಷರು ಆದೇಶ ನೀಡಿರುತ್ತಾರೆ. ಈ ಅವಧಿಯಲ್ಲಿ ಈ ಸದಸ್ಯರ ಬ್ಯಾಂಕ್ ಬಡ್ಡಿಯನ್ನು ಯೋಜನೆಯೇ ಪಾವತಿಸುವಂತೆ ಅವರು ಸೂಚಿಸಿದರು. ಇದಲ್ಲದೆ ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಅಡಚಣೆಯುಂಟಾಗಿ ಆದಾಯ ಕಡಿಮೆಯಾಗಿದ್ದವರು, ಕಡಿಮೆ ಮೊತ್ತದ ಕಂತನ್ನು ಕಟ್ಟಬಯಸುವವರು ಈ ವಿಷಯವನ್ನು ಸಂಘದಲ್ಲಿ ಮುಕ್ತವಾಗಿ ಚರ್ಚಿಸಿ ಅನುಮತಿಗಳನ್ನು ಪಡಕೊಳ್ಳಬಹುದೆಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿರುತ್ತಾರೆ. ಆದರೆ ಯಾವುದೇ ಕಾರಣಕ್ಕೆ ಸಂಘದ ಶಿಸ್ತನ್ನು ಕಳೆದುಕೊಳ್ಳಬಾರದು ಇದರಿಂದ ಭವಿಷ್ಯದಲ್ಲಿ ಅವರ ಆರ್ಥಿಕ ಸಾಮರ್ಥ್ಯಕ್ಕೆ ಧಕ್ಕೆಯುಂಟಾಗಬಹುದು ಎಂದವರು ತಿಳಿಸಿದರು.

ಇದೇ ಸಂದರ್ಭ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು ಕೊಡಗು ಜಿಲ್ಲೆಯಲ್ಲಿರುವ ಸ್ವಸಹಾಯ ಸಂಘಗಳ ಸದಸ್ಯರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಎಲ್ಲ ರೀತಿಯ ಸಹಾಯವನ್ನು ನೀಡುವಂತೆ ಮತ್ತು ಅವರೊಡನೆ ಇದ್ದು ಸಹಕಾರ ನೀಡುವಂತೆ ಕಾರ್ಯಕರ್ತರಿಗೆ ಸೂಚಿಸಿದರು. ಸಭೆಯಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್, ಕರಾವಳಿ ಪ್ರಾದೇಶಿಕ ನಿರ್ದೇಶಕ ಶ್ರೀ ಮಹಾವೀರ ಅಜ್ರಿ, ಮೈಸೂರು ಪ್ರಾದೇಶಿಕ ನಿರ್ದೇಶಕ ಶ್ರೀ ಶ್ರೀಹರಿ, ಕೊಡಗು ಜಿಲ್ಲೆ ನಿರ್ದೇಶಕ ಶ್ರೀ ಯೋಗೀಶ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *