ಶೀಘ್ರ ಆನ್​ಲೈನ್​ನಲ್ಲೂ ಸಿಗಲಿದೆ ಇ-ಸ್ಟಾಂಪ್ ಸೌಲಭ್ಯ

ಬ್ಯಾಂಕ್ ಲೋನ್, ಬಾಡಿಗೆ ಮನೆ, ಆಸ್ತಿ ಮಾರಾಟ ಕ್ರಯಪತ್ರ ಸೇರಿ ಇನ್ನಿತರ ಕರಾರುಗಳಿಗೆ ಅತ್ಯಗತ್ಯವಾಗಿರುವ ಇ-ಸ್ಟಾಂಪ್ ಕಾಗದ ಪಡೆಯಲು ಇನ್ಮುಂದೆ ಅಧಿಕೃತ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ. ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ಹಣ ಪಾವತಿಸಿ ಪ್ರಿಂಟೌಟ್ ಪಡೆದುಕೊಳ್ಳುವ ಸೌಲಭ್ಯ ಶೀಘ್ರದಲ್ಲೇ ರಾಜ್ಯದ ಜನತೆಗೆ ಮುಕ್ತವಾಗಲಿದೆ.
ಸ್ಟಾಕ್ ಹೋಲ್ಡಿಂಗ್ ಕಾಪೋರೇಷನ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಈ ಹೊಸ ವ್ಯವಸ್ಥೆ ಜಾರಿಗೆ ತೀರ್ವನಿಸಿದ್ದು, ಉಪ ಚುನಾವಣೆ ಬಳಿಕ ಯೋಜನೆ ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಿಕೊಂಡಿದೆ. ಸ್ಟಾಕ್ ಹೋಲ್ಡಿಂಗ್ಸ್ ಕಾಪೋರೇಷನ್ ಇಂಡಿಯಾ ಸಂಸ್ಥೆಯ ಅಧಿಕೃತ 3500 ಕೇಂದ್ರಗಳಲ್ಲಿ ಸ್ಥಿರಾಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರಿಗಳ ಪತ್ರ, ಮಾಲೀಕರು ಮತ್ತು ನೌಕರರು ಸೇರಿ ಇನ್ನಿತರ ಒಪ್ಪಂದ ಪತ್ರಗಳನ್ನು ಪಡೆದು ನೋಟರಿ ಮಾಡಿಸಿಕೊಳ್ಳಲು ಸದ್ಯ ಅವಕಾಶವಿದೆ. ಆನ್​ಲೈನ್​ನಲ್ಲೇ ಇ-ಸ್ಟಾಂಪ್ ಪಡೆಯುವ ಈ ಹೊಸ ವ್ಯವಸ್ಥೆಯನ್ನು ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆ ಮುಗಿದ ಬಳಿಕ ಅಧಿಕೃತವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತದೆ. ನಕಲಿ ಇ-ಸ್ಟಾಂಪ್ ಮತ್ತು ವಂಚನೆ ತಡೆಗಟ್ಟಲು ಮಾಹಿತಿ ಭರ್ತಿ ಮಾಡಿದ ಅರ್ಜಿಗಳನ್ನು ಕಂಪ್ಯೂಟರ್​ನಲ್ಲಿ ನಮೂದಿಸಲಾಗುತ್ತದೆ. ಅರ್ಜಿಯಲ್ಲಿ ಭರ್ತಿಯಾದ ಮಾಹಿತಿ ಆಧರಿಸಿ ಒಮ್ಮೆ ಮಾತ್ರವೇ ಇ ಸ್ಟಾಂಪ್ ಪಡೆದುಕೊಳ್ಳಬಹುದು ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕ್​ಚಂದ್ರ ಮಾಹಿತಿ ನೀಡಿದ್ದಾರೆ.
ವರದಿ – ಹೋಮೇಶ್,ಮಣಗಲಿ.

Leave a Reply

Your email address will not be published. Required fields are marked *