ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್​ ವಿಧಿವಶ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್​ ಕುಮಾರ್(59)​ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.ತೀವ್ರ ಅನಾರೋಗ್ಯ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ.ಪಾರ್ಥೀವ ಶರೀರ ರವಾನೆ
ಖಾಸಗಿ ಆಸ್ಪತ್ರೆಯಿಂದ ಲಾಲ್ ಬಾಗ್ ರಸ್ತೆಯಲ್ಲಿರುವ ಸುಮೇರ ನಿವಾಸಕ್ಕೆ ಅನಂತ್​ ಕುಮಾರ್​ ಅವರ ಪಾರ್ಥಿವ ಶರೀರ ರವಾನೆಯಾಗಿದೆ. ಸದ್ಯ ಕುಟುಂಬದವರಿಗೆ ಮಾತ್ರ ಮನೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ 9 ಗಂಟೆ ಸಮಯದ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಪೊಲೀಸರಿಂದ ‌ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.ಬಾಲ್ಯ ಜೀವನ
ಅನಂತ್​ ಕುಮಾರ್ ಅವರು ಜುಲೈ 22, 1959 ರಂದು ಶ್ರೀ ಎಚ್. ಎನ್. ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ದಂಪತಿಗಳ ಮಗನಾಗಿ ಜನಿಸಿದ್ದರು. ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆರ್‌ಎಸ್‌ಎಸ್ ತತ್ವಗಳಿಂದ ಪ್ರೇರಿತರಾಗಿದ್ದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು.ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್ ಒಬ್ಬ ಯಶಸ್ವಿ ರಾಜಕಾರಣಿ. ಕರ್ನಾಟಕದ ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಜಯಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಅನಂತ್​ ಕುಮಾರ್​ ಅವರು ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *